Bank FD
ಬ್ಯಾಂಕುಗಳಲ್ಲಿ (banks) ಫಿಕ್ಸೆಡ್ ಡೆಪಾಸಿಟ್ ಖಾತೆ(Fixed Deposit Account)ಯಲ್ಲಿ ಮಾಡುವ ಹೂಡಿಕೆ(investment)ಗಳು ಸುರಕ್ಷಿತ(safe). ಇತರ ಹೂಡಿಕೆಗಳಿಗೆ ಹೋಲಿಸಿದರೆ ಸ್ಥಿರ ಠೇವಣಿ(Fixed Deposit) ಯಾವತ್ತೂ ಸುರಕ್ಷಿತ. ಇಲ್ಲಿ FD ಹಣ ಕಳೆದುಕೊಳ್ಳುವ ಅಪಾಯವಿಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ, ಬ್ಯಾಂಕಿನಲ್ಲಿ 5 ಲಕ್ಷ ರೂ.ಗಿಂತ ಹೆಚ್ಚು ಫಿಕ್ಸೆಡ್ ಡೆಪಾಸಿಟ್ ಮಾಡುವವರು ಭಾರತೀಯ ರಿಸರ್ವ್ ಬ್ಯಾಂಕಿನ(Reserve Bank of India – RBI) ನಿಯಮಗಳನ್ನು(Rules) ತಿಳಿದುಕೊಳ್ಳುವುದು ಮುಖ್ಯ.
ಬ್ಯಾಂಕಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದರೆ ಸ್ಥಿರ ಆದಾಯ ಬರುತ್ತದೆ ಎಂಬುದು ನಿಜ. ಆದರೆ, ಕೆಲವು ಸಂದರ್ಭಗಳಲ್ಲಿ ಬ್ಯಾಂಕುಗಳಲ್ಲಿ ಮಾಡುವ ಠೇವಣಿಗಳು ಸಹ ಸುರಕ್ಷಿತವಲ್ಲ. ಬ್ಯಾಂಕ್ ದಿವಾಳಿಯಾದರೆ ಏನು ಮಾಡುವುದು? ಬ್ಯಾಂಕ್ ದಿವಾಳಿಯಾದರೆ ಫಿಕ್ಸೆಡ್ ಡೆಪಾಸಿಟ್‌ನಲ್ಲಿರುವ ಹಣ ಸುರಕ್ಷಿತವಾಗಿರುತ್ತದೆಯೇ? ಸಣ್ಣ ಮೊತ್ತದಲ್ಲಿ ಠೇವಣಿ ಇಟ್ಟರೆ ಪರವಾಗಿಲ್ಲ, ಲಕ್ಷಗಟ್ಟಲೆ ಠೇವಣಿ ಇಡುವವರು ಭಾರತೀಯ ರಿಸರ್ವ್ ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ಸಂಬಂಧಿತ ರಿಸರ್ವ್ ಬ್ಯಾಂಕ್ ನಿಯಮಗಳನ್ನು ತಿಳಿದಿರಲೇಬೇಕು.
ಬ್ಯಾಂಕಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡುವ ಗ್ರಾಹಕರನ್ನು ರಕ್ಷಿಸಲು ರಿಸರ್ವ್ ಬ್ಯಾಂಕ್ ಡೆಪಾಸಿಟ್ ಇನ್ಶುರೆನ್ಸ್ ಕ್ರೆಡಿಟ್ ಗ್ಯಾರಂಟಿ ಯೋಜನೆ(Deposit Insurance Credit Guarantee Scheme…)ಯನ್ನು ಜಾರಿಗೆ ತಂದಿದೆ. ಅನೇಕ ಗ್ರಾಹಕರಿಗೆ ಈ ಯೋಜನೆಯ ಬಗ್ಗೆ ತಿಳಿದಿಲ್ಲ. ಬ್ಯಾಂಕುಗಳು ಸಹ ಈ ಬಗ್ಗೆ ಗ್ರಾಹಕರಿಗೆ ತಿಳಿಸುವುದಿಲ್ಲ. ರಿಸರ್ವ್ ಬ್ಯಾಂಕಿನ ಅಂಗಸಂಸ್ಥೆಯಾದ ಡೆಪಾಸಿಟ್ ಇನ್ಶುರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಬ್ಯಾಂಕುಗಳಲ್ಲಿ ಠೇವಣಿಗಳಿಗೆ ವಿಮೆಯನ್ನು ಒದಗಿಸುತ್ತದೆ.
DICGC ಮೂಲಕ ಬ್ಯಾಂಕ್ ಠೇವಣಿ ಹಣಕ್ಕೆ ವಿಮಾ ಮೊತ್ತ ಖಚಿತವಾಗುತ್ತದೆ. ಒಂದು ಬ್ಯಾಂಕ್ ದಿವಾಳಿಯಾಗಿ ಮುಚ್ಚುವ ಪರಿಸ್ಥಿತಿ ಬಂದರೆ ಈ ವಿಮೆಯ ಪ್ರಯೋಜನ ಸಿಗುತ್ತದೆ. ಆದರೆ ಇದಕ್ಕೂ ಒಂದು ಮಿತಿ ಇದೆ. ನಿಮ್ಮ ಠೇವಣಿ ಮೊತ್ತ 5 ಲಕ್ಷ ರೂ.ಗಳವರೆಗೆ ಇದ್ದರೆ ಮಾತ್ರ ವಿಮೆಯ ವ್ಯಾಪ್ತಿ ಸಿಗುತ್ತದೆ. ಅದು ಕೂಡ ಅಸಲು ಮತ್ತು ಬಡ್ಡಿಯೊಂದಿಗೆ ಸೇರಿ 5 ಲಕ್ಷ ರೂ.ಗಳವರೆಗೆ ಇದ್ದರೆ ಮಾತ್ರ DICGC ವಿಮೆಯನ್ನು ಪಡೆಯಬಹುದು.
ದಿವಾಳಿಯಾದ ಬ್ಯಾಂಕುಗಳ ಗ್ರಾಹಕರಿಗೆ ಆಗುವ ನಷ್ಟವನ್ನು ಈ ವಿಮೆ ಸರಿದೂಗಿಸಲು ಪ್ರಯತ್ನಿಸುತ್ತದೆ. ಠೇವಣಿ ವಿಮಾ ಕ್ರೆಡಿಟ್ ಗ್ಯಾರಂಟಿ ಮೂಲಕ ತಮ್ಮ ಹಣವನ್ನು ಮರಳಿ ಪಡೆಯಲು ಅರ್ಹರಿರುವವರು ಅರ್ಜಿ ಸಲ್ಲಿಸಿ ಆ ಮೊತ್ತವನ್ನು ಪಡೆಯಬೇಕು. ಅರ್ಜಿ ಸಲ್ಲಿಸಿದ 90 ದಿನಗಳಲ್ಲಿ ವಿಮಾ ಮೊತ್ತವನ್ನು ನೀಡಲಾಗುತ್ತದೆ. ಉದಾಹರಣೆಗೆ, ನೀವು 5 ಲಕ್ಷ ರೂ.ಗಳಿಗಿಂತ ಹೆಚ್ಚು ಫಿಕ್ಸೆಡ್ ಡೆಪಾಸಿಟ್ ಮಾಡಿದ್ದೀರಿ ಎಂದುಕೊಳ್ಳಿ, ಗರಿಷ್ಠ 5 ಲಕ್ಷ ರೂ.ಗಳು ಮಾತ್ರ ಸಿಗುತ್ತದೆ. ಅದಕ್ಕಿಂತ ಹೆಚ್ಚಿನ ಠೇವಣಿ ಮೊತ್ತ ಮತ್ತು ಬಡ್ಡಿಯನ್ನು ಕಳೆದುಕೊಳ್ಳಬೇಕಾಗುತ್ತದೆ.
ಒಂದೇ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಮಾಡಲಾದ ಒಟ್ಟು ಠೇವಣಿಗಳನ್ನು ಒಟ್ಟಿಗೆ ಪರಿಗಣಿಸಿ ಈ ವಿಮಾ ಮೊತ್ತವನ್ನು ನೀಡಲಾಗುತ್ತದೆ. ವಿವಿಧ ಶಾಖೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡುವುದರಿಂದ ಪ್ರತ್ಯೇಕವಾಗಿ ಲೆಕ್ಕ ಹಾಕಲಾಗುವುದಿಲ್ಲ. ಒಟ್ಟಾರೆಯಾಗಿ 5 ಲಕ್ಷದವರೆಗಿನ ಫಿಕ್ಸೆಡ್ ಡೆಪಾಸಿಟ್‌ಗೆ ಮಾತ್ರ ವಿಮೆ ಇರುತ್ತದೆ.
ಆದ್ದರಿಂದಲೇ ಫಿಕ್ಸೆಡ್ ಡೆಪಾಸಿಟ್ ಮಾಡುವ ಮೊದಲು RBI ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ. ಹಣವನ್ನು ವಿವಿಧ ಬ್ಯಾಂಕುಗಳಲ್ಲಿ ವಿವಿಧ ಯೋಜನೆಗಳಲ್ಲಿ ಠೇವಣಿ ಮಾಡಿದರೆ, ಹೂಡಿಕೆ ಮಾಡಿದ ಹಣಕ್ಕೆ ಸಂಪೂರ್ಣವಾಗಿ ವಿಮೆ ಸಿಗುತ್ತದೆ. ಈ ವಿಮೆಗೆ ಯಾವುದೇ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ. ಆಯಾ ಬ್ಯಾಂಕುಗಳೇ ಪಾವತಿಸುತ್ತವೆ.