Marriage Certificate
ವಿವಾಹ ನೋಂದಣಿ ಪತ್ರ(Marriage Certificate) ದಂಪತಿಯ ವೈವಾಹಿಕ ಸಂಬಂಧವನ್ನು ಶ್ರುತಪಡಿಸುವ ಕಾನೂನು ಬದ್ಧ ದಾಖಲೆ ಪತ್ರವಾಗಿದೆ. ಇಂದು ಅತಿ ಅಗತ್ಯವಾದ ದಾಖಲೆಪತ್ರಗಳಲ್ಲಿ ಒಂದು. ಭಾರತದಲ್ಲಿ ನಾನಾ ಕಾನೂನುಗಳ ಮೂಲಕ ವಿವಾಹವನ್ನು ನೋಂದಣಿ ಮಾಡಿಸಿಕೊಳ್ಳಬಹುದು. ಈ ಪೈಕಿ ಮುಖ್ಯ ಕಾನೂನುಗಳೆಂದರೆ, ಹಿಂದೂ ಮದುವೆ ಕಾನೂನು 1955, ವಿಶೇಷ ಮದುವೆ ಕಾನೂನು 1954, ಪಾರ್ಸಿ ಮದುವೆ ಕಾನೂನು ಹಾಗೂ ವಿಚ್ಛೇದನ ಕಾನೂನು 1936.
ಹಿಂದೂ ವೈವಾಹಿಕ ಕಾಯ್ದೆ ಹಿಂದೂಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ, ಹಿಂದೂ ಧರ್ಮಿಯರು, ಬೌದ್ಧರು, ಬ್ರಹ್ಮ, ಪ್ರಾರ್ಥನಾ, ಹಾಗೂ ಆರ್ಯ ಸಮಾಜ ಗುಂಪುಗಳಿಗೆ ಇದು ಅನ್ವಯಿಸುತ್ತದೆ. ವಿಶೇಷ ವೈವಾಹಿಕ ಕಾಯ್ದೆ ದೇಶದ ಎಲ್ಲಾ ನಾಗರಿಕರಿಗೆ, ಯಾವುದೇ ಧರ್ಮ, ಜಾತಿ, ಭಾಷೆಯ ಗಣನೆ ಇಲ್ಲದೆ ಅನ್ವಯವಾಗುತ್ತದೆ. ಪಾರ್ಸಿ ವೈವಾಹಿಕ ಹಾಗೂ ವಿಚ್ಛೇದನ ಕಾಯೆ 1936, ಪಾರ್ಸಿ ಹಾಗೂ ಝೋರಾಷಟ್ರೇನ್ ಧರ್ಮಿಯರಿಗೆ ಅನ್ವಯವಾಗುತ್ತದೆ.
ಕರ್ನಾಟಕದಲ್ಲಿ ವೈವಾಹಿಕ ಪ್ರಮಾಣ ಪತ್ರ ಪಡೆಯಲು ಬೇಕಾದ ಅರ್ಹತೆಗಳು
* ವರನಿಗೆ 21 ವರ್ಷ ತುಂಬಿರಬೇಕು
* ವಧುವಿಗೆ 18 ವರ್ಷ ತುಂಬಿರಬೇಕು
ಕರ್ನಾಟಕದಲ್ಲಿ ಮದುವೆ ಪ್ರಮಾಣ ಪತ್ರ ಪಡೆಯಲು ಅಗತ್ಯವಾದ ದಾಖಲೆಗಳು
ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಿ, ಕರ್ನಾಟಕದಲ್ಲಿ ವೈವಾಹಿಕ ಪ್ರಮಾಣ ಪತ್ರ ಪಡೆಯಬೇಕು.
* ಸಂಪೂರ್ಣವಾಗಿ ತುಂಬಿದ ಈ ಅರ್ಜಿ ನಮೂನೆ. ಈ ಭರ್ತಿ ಮಾಡಿದ ಅರ್ಜಿ ನಮೂನೆಗೆ ವರ-ವಧೂ ಇಬ್ಬರೂ ಸಹಿ ಹಾಕಿರಬೇಕು.
* ಮದುವೆಯ ಆಮಂತ್ರಣ ಪತ್ರದ ಮೂಲ ಪ್ರತಿ.
ಅರ್ಜಿದಾರ ವರ-ವಧುರರ ವಿಳಾಸದ ದಾಖಲೆ. ಇಬ್ಬರ ಪೈಕಿ ಒಬ್ಬರು, ಅವರದೇ ಹೆಸರಿನಲ್ಲಿರುವ ತಮ್ಮ ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ ಪತ್ರ, ಬಾಡಿಗೆ ಮನೆ ಕರಾರು ಪತ್ರವನ್ನು ಸಲ್ಲಿಸಬೇಕು.
* ವರ-ವಧು ವಯಸ್ಸಿನ ದೃಢೀಕರಣ ದಾಖಲೆ. ಎಸ್ಎಸ್ಎಲ್ಸಿ/ ಹತ್ತನೆ ತರಗತಿ ಅಂಕಪಟ್ಟಿ ಅಥವಾ ಪಾಸ್ಪೋರ್ಟ್ನ್ನು ದಾಖಲೆಯಾಗಿ ಬಳಸಬಹುದು.
* ವರ-ವಧು ಗುರುತಿನ ದೃಢೀಕರಣ ದಾಖಲೆ: ಪಾಸ್ಪೋರ್ಟ್/ ಪಾನ್ ಕಾರ್ಡ್/ ಮತದಾರರ ಗುರುತಿನ ಚೀಟಿ/ ವಾಹನ ಚಾಲನಾ ಪರವಾನಗಿ ಪತ್ರವನ್ನು ಇದಕ್ಕಾಗಿ ಬಳಸಬಹುದು.
* ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರ (ವರ-ವಧು ಇಬ್ಬರದ್ದೂ).
ವರ-ವಧು ಜೊತೆಗಿರುವ ಛಾಯಾಚಿತ್ರದ 6 ಪ್ರತಿಗಳು (2ಬಿ ಅಳತೆಯದ್ದು)
ವರ-ವಧು ಮದುವೆಯ ವಸ್ತ್ರದಲ್ಲಿ ತೆಗೆಸಿಕೊಂಡಿರುವ ಛಾಯಾ ಚಿತ್ರಗಳು (ತಮ್ಮ ಕುಟುಂಬದ ಸದಸ್ಯರ ಜೊತೆಗೆ ತೆಗೆದ ಛಾಯಾ ಚಿತ್ರಗಳು ಅಪೇಕ್ಷಣೀಯ)
ನಿಗದಿತ ನಮೂನೆಯಲ್ಲಿ ವರ-ವಧು ಮದುವೆ ಸಂಬಂಧ ಒಂದು ಅಫಿಡಾವಿಟ್ ಸಲ್ಲಿಸಬೇಕು.
* ಆಧಾರ್ ಕಾರ್ಡ್
* ಮದುವೆಯ ಬಳಿಕ ಹೆಸರು ಬದಲಾವಣೆ ಮಾಡಿಕೊಂಡಿದ್ದರೆ, ಈ ಸಂಬಂಧ ಒಂದು ಅಫಿಡವಿಟ್.
*ಹೆಸರು ಬದಲಾವಣೆ ಸಂಬಂಧ ನೀಡಲಾಗಿದ್ದ ಪತ್ರಿಕಾ ಪ್ರಕಟಣೆಯ ದಾಖಲೆ.
ಗಮನಿಸಿರಿ
* ಎಲ್ಲಾ ದಾಖಲೆಗಳನ್ನು ಸ್ವಯಂ ದೃಢೀಕರಿಸಿದ ಬಳಿಕವೇ ಸಲ್ಲಿಸಬೇಕು.
* ವರ-ವಧು ಪೈಕಿ ಒಬ್ಬರಾದರೂ, ಸರಕಾರಿ ಇಲಾಖೆಗಳು ನೀಡಿದ ವಿಳಾಸ ದೃಢೀಕರಣ ದಾಖಲೆ ಹಾಜರು ಪಡಿಸಬೇಕು.
* ಎಲ್ಲಾ ಅಗತ್ಯ ದಾಖಲೆಗಳನ್ನು ಪರಿಶೀಲನೆಗಾಗಿ ನೋಂದಣಾಧಿಕಾರಿ ಕಚೇರಿಗೆ ಕೊಂಡೊಯ್ಯಬೇಕಾಗುತ್ತದೆ.
ಕರ್ನಾಟಕದಲ್ಲಿ ಆಫ್ಲೈನ್ ಮೂಲಕ ವಿವಾಹ ನೋಂದಣಿ
* ವರ ಅಥವಾ ವಧುವಿನ ವಿಳಾಸ ವ್ಯಾಪ್ತಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಬೇಕು, ಮದುವೆ ನಡೆದ ಸ್ಥಳದ ವ್ಯಾಪ್ತಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಲ್ಲ.
* ನಿಮ್ಮ ಮನೆ ಸಮೀಪದ ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ. ಅಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಕೇಳಿ ಪಡೆಯಿರಿ.
* ಅತ್ಯಂತ ಜಾಗರೂಕತೆಯಿಂದ ಈ ಅರ್ಜಿ ನಮೂನೆಯನ್ನು ತುಂಬಿರಿ. ಒಂದೊಮ್ಮೆ ಮದುವೆ ಬಳಿಕ, ವರ-ವಧು ಹೆಸರು ಬದಲಾವಣೆ ಆಗಿದ್ದರೆ, ಹೊಸ ಹೆಸರನ್ನೇ ಅರ್ಜಿ ನಮೂನೆಯಲ್ಲಿ ಉಲ್ಲೇಖಿಸಿ.
* ಈ ಅರ್ಜಿಗೆ ಮದುವೆಯಲ್ಲಿ ಪಾಲ್ಗೊಂಡಿದ್ದ ಸಾಕ್ಷಿದಾರರ ಸಹಿ ಅಗತ್ಯ. ನಿಮ್ಮ ಸ್ನೇಹಿತರು ಅಥವಾ ಕುಟುಂಬಿಕರು, ಸಾಕ್ಷಾಧಾರರಾಗಬಹುದು.
* ಹೀಗೆ ಸಂಪೂರ್ಣವಾಗಿ ತುಂಬಿದ ಅರ್ಜಿಯನ್ನು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ, ಉಪ ನೋಂದಣಿ ಕಚೇರಿಗೆ ಸಲ್ಲಿಸಿ. ಈ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಬಳಿಕ, ದಾಖಲೆಗಳನ್ನು ಹಿಂತಿರುಗಿಸುತ್ತಾರೆ.
* ಉಪ ನೋಂದಣಿ ಕಚೇರಿಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ, ವರ-ವಧು ಇಬ್ಬರೂ ನಿಗದಿತ ದಾಖಲೆಗಳಲ್ಲಿ ಸಹಿ ಮಾಡಬೇಕಾಗುತ್ತದೆ.
* ಆ ಬಳಿಕ, ಇಡೀ ಪ್ರಕ್ರಿಯೆ ಸಂಪೂರ್ಣಗೊಳ್ಳುತ್ತದೆ. ವಿವಾಹ ನೋಂದಣಿ ಪತ್ರದ ಪ್ರತಿಯನ್ನು ವರ, ವಧು ಇಬ್ಬರಿಗೂ ನೀಡಲಾಗುತ್ತದೆ. ಒಂದು ಪ್ರತಿಯನ್ನು ಕಚೇರಿ ಉಪಯೋಗಕ್ಕೆ ಇಟ್ಟುಕೊಳ್ಳಲಾಗುತ್ತದೆ.
* ಕರ್ನಾಟಕದಲ್ಲಿ ವಿವಾಹ ನೋಂದಣೆ ಮಾಡಿಕೊಳ್ಳುವ, ಉಪ ನೋಂದಾವಣೆ ಅಧಿಕಾರಿಗಳ ಕಚೇರಿ ವಿವರ ಇಲ್ಲಿ ಲಭ್ಯವಿದೆ. ನಿಮ್ಮ ವಾಸಸ್ಥಳದ ವ್ಯಾಪ್ತಿಯ ಕಚೇರಿಯನ್ನು ಇಲ್ಲಿ ತಿಳಿದುಕೊಳ್ಳಬಹುದು.
ವಿವಾಹ ನೋಂದಣಿಗೆ ಸಾಕ್ಷಿಗಳು
* ಮದುವೆಗೆ ಹಾಜರಾದ ಯಾವುದೇ ವ್ಯಕ್ತಿ ಮದುವೆ ನೋಂದಣಿಗೆ ಸಾಕ್ಷಿಯಾಗಬಹುದು.
* ವರ-ವಧುವಿನ ಹತ್ತಿರ ರಕ್ತ ಸಂಬಂಧಿ ಸಾಕ್ಷಿಯಾಗುವುದನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುತ್ತದೆ.
* ಸಾಮಾನ್ಯವಾಗಿ ಮದುವೆ ನೋಂದಣಿ ಸಂದರ್ಭದಲ್ಲಿ ವರ-ವಧುಗಳ ಹೆತ್ತವರನ್ನೇ ಸಾಕ್ಷಿಯಾಗಿ ಕರೆತರಲು ಅಧಿಕಾರಿಗಳು ತಿಳಿಸುತ್ತಾರೆ.
ವಿವಾಹ ನೋಂದಣಿ ದರ
* ಹಿಂದೂ ವೈವಾಹಿಕ ಕಾಯ್ದೆ ಪ್ರಕಾರ ವಿವಾಹ ನೋಂದಾವಣೆಗೆ ೧೫ ರೂಪಾಯಿ ತಗಲುತ್ತದೆ. ಈ ಪೈಕಿ ಅರ್ಜಿ ಶುಲ್ಕ ೫ ರೂಪಾಯಿಗಳಾದರೆ, ದೃಢೀಕೃತ ನೋಂದಾವಣೆ ಪಾತ್ರಕ್ಕೆ ೧೦ ರೂಪಾಯಿ.
* ವಿಶೇಷ ವೈವಾಹಿಕ ಕಾಯ್ದೆಯಡಿ, ಮದುವೆಯನ್ನು ದೃಢೀಕರಿಸಲು, ಉಪ ನೋಂದಾವಣೆ ಅಧಿಕಾರಿ ಕಚೇರಿಯಲ್ಲಿ ರೂಪಾಯಿ ೧೦ ದರ ನಿಗದಿ ಪಡಿಸಲಾಗಿದೆ.
* ಉಪ ನೋಂದಾವಣೆ ಕಚೇರಿಯ ಹೊರಗಡೆ, ಈ ಮೊತ್ತ ರೂಪಾಯಿ ೧೫ ಆಗಿದೆ ಈ ಮದುವೆ ಸಂಬಂಧದ ನೋಟೀಸ್ ನೀಡುವ ಅರ್ಜಿ ಬೆಲೆ ೩ ರೂಪಾಯಿ. ಈ ವಿವಾಹ ನೋಂದಾವಣೆಯ ದೃಢೀಕೃತ ನಕಲು ಪಡೆಯಲು ೨ ರೂಪಾಯಿ ಪಾವತಿಸಬೇಕು.
* ಪಾರ್ಸಿ ವಿವಾಹ ಕಾಯ್ದೆಯಡಿ, ವಿವಾಹ ನೋಂದಾವಣೆಯ ದೃಢೀಕೃತ ಪ್ರತಿ ಪಡೆಯಲು ೨ ರೂಪಾಯಿ ದರ ನಿಗದಿ ಪಡಿಸಲಾಗಿದೆ.