Gruhajyothi
ಕರ್ನಾಟಕದ ಸರ್ಕಾರದ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದು ‘ಗೃಹಜ್ಯೋತಿ’. ಗೃಹ ಬಳಕೆಗೆ 200 ಯೂನಿಟ್‌ಗಳ ಉಚಿತ ವಿದ್ಯುತ್ ನೀಡುವ ಯೋಜನೆ ಇದಾಗಿದೆ. ಸರ್ಕಾರ ಈಗ ಬಾಡಿಗೆ ಮನೆಗಳಲ್ಲಿ ವಾಸಿಸುವ ಜನರಿಗೆ ಅನುಕೂಲವಾಗುವಂತೆ ಯೋಜನೆಯಲ್ಲಿ ಬದಲಾವಣೆ ಮಾಡಿದೆ.
ಈ ಕುರಿತು ಅಪರ್ಣಾ ಪಾವಟೆ, ಸರ್ಕಾರದ ಅಪರ ಕಾರ್ಯದರ್ಶಿ, ಇಂಧನ ಇಲಾಖೆ ಆದೇಶ ಹೊರಡಿಸಿದ್ದಾರೆ. ಈ ಆದೇಶ ‘ಗೃಹಜ್ಯೋತಿ’ ಯೋಜನೆಯ ನೋಂದಣಿ ವ್ಯವಸ್ಥೆಯಾದ ಸೇವಾ ತಂತ್ರಾಂಶದಲ್ಲಿ ಗ್ರಾಹಕರನ್ನು De-Link ಮಾಡುವ ಸೌಲಭ್ಯ ಕಲ್ಪಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ಸರ್ಕಾರಿ ಆದೇಶ ದಿನಾಂಕ 05/06/2023 ಉಲ್ಲೇಖ ಮಾಡಲಾಗಿದೆ.
ಆದೇಶದ ವಿವರಗಳು
‘ಗೃಹ ಜ್ಯೋತಿ’ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್ಗಳ ಮೇಲೆ ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿದೆ.
ಷರತ್ತಿಗೆ ಅನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್‌ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಲು ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಅದರಂತೆ, ಸರ್ಕಾರಿ ಆದೇಶವನ್ನು ದಿನಾಂಕ 05/06/2023ರಲ್ಲಿ ಹೊರಡಿಸಿದೆ.
‘ಗೃಹ ಜ್ಯೋತಿ’ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ತಂತ್ರಾಂಶದ ಮೂಲಕ ನೋಂದಣಿ ಮಾಡಬಹುದಾಗಿರುತ್ತದೆ. ಆದರೆ, ಸೇವಾ ಸಿಂಧು ತಂತ್ರಾಂಶದಲ್ಲಿ ಗ್ರಾಹಕರನ್ನು De-Link ಮಾಡುವ ಸೌಲಭ್ಯವನ್ನು ಪ್ರಸ್ತುತ ಕಲ್ಪಿಸಿರುವುದಿಲ್ಲ ಎಂದು ಆದೇಶ ಹೇಳಿದೆ.
ಗ್ರಾಹಕರು ತಮ್ಮ ಮನೆಯನ್ನು ಬದಲಾಯಿಸಿದಂತಹ ಸಂದರ್ಭದಲ್ಲಿ ಹಾಗೂ ಇತರೆ ಸಂದರ್ಭಗಳಲ್ಲಿ ಈಗಾಗಲೇ ಈ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸ್ಥಾವರದಿಂದ ಸ್ಥಗಿತಗೊಳಿಸಿ ಮತ್ತೊಂದು ಸ್ಥಾವರಕ್ಕೆ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲು De-Link ಅವಕಾಶ ಮಾಡಿಕೊಡಬೇಕಾಗುತ್ತದೆ.
ಆದ್ದರಿಂದ, ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಈ ಸಂಬಂಧ, ಮುಂದಿನ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಈ ಆದೇಶದಂತೆ ಇನ್ನು ಮುಂದೆ ಬಾಡಿಗೆ ಮನೆಯಲ್ಲಿ ವಾಸಿಸುವ ಜನರು ಸೇವಾಸಿಂಧು ಪೋರ್ಟಲ್ ಮೂಲಕವೇ ಮನೆಯನ್ನು ಖಾಲಿ ಮಾಡುವಾಗ ಗೃಹಜ್ಯೋತಿ ಯೋಜನೆ ರದ್ದು ಮಾಡಬಹುದಾಗಿದೆ.
ಹೇಗಿದೆ ಈಗ ಪ್ರಕ್ರಿಯೆ?; ಪ್ರಸ್ತುತ ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರು ಗೃಹಜ್ಯೋತಿ ಯೋಜನೆಯಡಿ ಆಧಾರ್ ನಂಬರ್ ನೀಡಿ ನೋಂದಣಿ ಮಾಡಿಸುತ್ತಾರೆ. ಆದರೆ ಮನೆಯನ್ನು ಖಾಲಿ ಮಾಡುವಾಗ ಅವರು ಆನ್‌ಲೈನ್ ಮೂಲಕ ಹಳೆ ಮನೆ ನೋಂದಣಿ ರದ್ದುಗೊಳಿಸಲು ಅವಕಾಶವಿಲ್ಲ. ಇದಕ್ಕಾಗಿ ಅವರು ಹತ್ತಿರದ ವಿದ್ಯುತ್ ಕಛೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು.
ಅವರ ಹೆಸರಿನ ಆಧಾರ್ ನಂಬರ್‌ನಲ್ಲಿ ನೋಂದಣಿಯಾದ ಗೃಹಜ್ಯೋತಿ ಯೋಜನೆಯ ರದ್ದಾದ ಬಳಿಕ ಪುನಃ ಹೊಸ ಮನೆಯ ನಂಬರ್ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಆದ್ದರಿಂದ ಆನ್‌ಲೈನ್ ಮೂಲಕ ರದ್ದತಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು.
ಗೃಹಜ್ಯೋತಿ ಯೋಜನೆ; 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳಲ್ಲಿ ಗೃಹಜ್ಯೋತಿ ಸಹ ಒಂದು. ಸರ್ಕಾರ 2023ರ ಜೂನ್ 18ರಂದು ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ನೊಂದಣಿಗೆ ಚಾಲನೆ ನೀಡಿತ್ತು.
ಈ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‍ವರೆಗಿನ ಬಳಕೆಯ ಮಿತಿಯಲ್ಲಿ ಉಚಿತ ವಿದ್ಯುತ್ ನೀಡಲಾಗುತ್ತದೆ. ಮೊದಲು ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅರ್ಹರಿದ್ದರು. ಅದನ್ನು ಈಗ 10 ಯೂನಿಟ್ ಎಂದು ಬದಲಾಯಿಸಲಾಗಿದೆ.
ಯೋಜನೆ ಫಲಾನುಭವಿಯಾಗಲು ಮೊಬೈಲ್ ಫೋನ್/ ಕಂಪ್ಯೂಟರ್ ಹಾಗೂ ಲ್ಯಾಪ್‍ಟ್ಯಾಪ್‌ಗಳಲ್ಲಿ ತಂತ್ರಾಂಶದ ಮೂಲಕವೂ ಸಹ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಫಲಾನುಭವಿಗಳು ಆಧಾರ್ ಕಾರ್ಡ್, ಗ್ರಾಹಕರ ಐಡಿ ಮಾಹಿತಿಗಳನ್ನು (ವಿದ್ಯುಚ್ಛಕ್ತಿ ಬಿಲ್‍ನಲ್ಲಿ ಇರುವಂತೆ) ನೋಂದಣಿ ಸಮಯದಲ್ಲಿ ನೀಡಬೇಕಾಗುತ್ತದೆ.
ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ಅಥವಾ ಯಾವುದೇ ವಿದ್ಯುತ್ ಕಚೇರಿಗಳಲ್ಲಿಯೂ ಸಹ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯುಚ್ಛಕ್ತಿ ಕಚೇರಿಯನ್ನು ಅಥವಾ 24×7 ಸಹಾಯವಾಣಿ 1912ಗೆ ಕರೆ ಮಾಡಬಹುದಾಗಿದೆ. ಈ ಯೋಜನೆಯಡಿ ರಾಜ್ಯದ 2 ಕೋಟಿ ಅಧಿಕ ಗೃಹ ಬಳಕೆ ವಿದ್ಯುತ್ ಗ್ರಾಹಕರು 2023ರ ಆಗಸ್ಟ್ 1ರಿಂದ ಶೂನ್ಯ ಬಿಲ್ ಪಡೆಯುತ್ತಿದ್ದಾರೆ.
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ವ್ಯಕ್ತಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ…
ಹಂತ 1: ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿ.
ಹಂತ 2: ‘ಗೃಹ ಜ್ಯೋತಿ’ ಸ್ಕೀಮ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಘೋಷಣೆಯನ್ನು ಟಿಕ್ ಮಾಡಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ‘ಒಪ್ಪುತ್ತೇನೆ’ ಬಟನ್ ಕ್ಲಿಕ್ ಮಾಡಿ.
ಹಂತ 4: ‘ಆಧಾರ್ ಸಂಖ್ಯೆ’ ನಮೂದಿಸಿ ಮತ್ತು ‘ವಿವರಗಳನ್ನು ಪಡೆಯಿರಿ’ ಬಟನ್ ಕ್ಲಿಕ್ ಮಾಡಿ.
ಹಂತ 5: ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ‘ಒಟಿಪಿ ರಚಿಸಿ’ ಬಟನ್ ಕ್ಲಿಕ್ ಮಾಡಿ.
ಹಂತ 6: OTP ಅನ್ನು ನಮೂದಿಸಿ ಮತ್ತು ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಿ.
ನೋಂದಾಯಿತ ಗ್ರಾಹಕರಿಗೆ ಇಮೇಲ್/SMS ಮೂಲಕ ಸ್ವೀಕೃತಿಯನ್ನು ಕಳುಹಿಸಲಾಗುತ್ತದೆ. ಭವಿಷ್ಯದ ಉದ್ದೇಶಗಳಿಗಾಗಿ ಸ್ವೀಕೃತಿಯನ್ನು ಇರಿಸಿ.