Bank Loan
ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಹಣಕಾಸಿನ ಅಗತ್ಯತೆ ಬರುತ್ತದೆ. ಎಲ್ಲ ಸಮಯದಲ್ಲೂ ನಮ್ಮ ಉಳಿತಾಯದ ಹಣ ಸಾಲದೆ ಇರಬಹುದು, ಇಂತಹ ಪರಿಸ್ಥಿತಿಯಲ್ಲಿ ಸಾಲ ಪಡೆದುಕೊಂಡು ನಮ್ಮ ಕೆಲಸಗಳನ್ನು ಮುಂದುವರಿಸಬೇಕಾಗುತ್ತದೆ. ಈ ವಿಷಯ ಬಂದಾಗ ಹೆಚ್ಚಿನ ಜನರು ಬ್ಯಾಂಕ್ ಗಳಲ್ಲಿ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಸಾಲ (Loan) ಪಡೆದುಕೊಳ್ಳಲು ಮುಂದಾಗುತ್ತಾರೆ.
ನಾವು ಬ್ಯಾಂಕ್ ನಿಂದ ಸಾಲ ಪಡೆದುಕೊಳ್ಳಬೇಕು ಎಂದರೆ ಅದಕ್ಕೂ ಕೂಡ ನಮ್ಮ ಆಸ್ತಿ ಪತ್ರಗಳು ಅಥವಾ ಬೆಲೆಬಾಳುವ ಒಡವೆಗಳನ್ನು ಅಡಮಾನ ಇಡಬೇಕಾಗುತ್ತದೆ. ಈ ರೀತಿ ಯಾವುದೇ ಆಸ್ತಿ ಇಲ್ಲದಿದ್ದರೂ ಸಾಲ ಪಡೆದುಕೊಳ್ಳಲು ಒಂದು ಆಪ್ಷನ್ ಇದೆ, ಆದರೆ ಇದಕ್ಕೆ ನಿಮ್ಮ ಸಿಬಿಲ್ ಸ್ಕೋರ್ (Cibil Score) ಉತ್ತಮವಾಗಿರಬೇಕು. ಸಿಬಿಲ್ ಸ್ಕೋರ್ ಚೆನ್ನಾಗಿರುವವರಿಗೆ ಶೀಘ್ರವಾಗಿ ಪರ್ಸನಲ್ ಲೋನ್ ಗಳು ಸಿಗುತ್ತವೆ.
ಸಿಬಿಲ್ ಸ್ಕೋರ್ ಎಂದರೆ ಒಬ್ಬ ವ್ಯಕ್ತಿಯ / ಕಂಪನಿಯ ಹಣಕಾಸಿನ ವ್ಯವಹಾರದ ಪಾರದರ್ಶಕತೆ (transparency) ಎನ್ನಬಹುದು. ಒಬ್ಬ ವ್ಯಕ್ತಿ / ಕಂಪನಿ ಬ್ಯಾಂಕ್ ನಲ್ಲಿ ಎಷ್ಟು ಉತ್ತಮವಾಗಿ ವ್ಯವಹರಿಸುತ್ತಿದ್ದಾನೆ ಎನ್ನುವುದನ್ನು ಆತ ಹಣ ಹೂಡಿಕೆ ಮಾಡುವ ಮತ್ತು ಸಾಲ ಪಡೆದುಕೊಳ್ಳುವ ಹಾಗೂ ಆ ಸಾಲವನ್ನು ಮರುಪಾವತಿಯಲ್ಲಿ ಮಾಡುವ ವಿಧಾನದಿಂದ ಅಳೆಯಲಾಗುತ್ತದೆ.
ಸಿಬಿಲ್ ಸ್ಕೋರ್ ಕಳಪೆ ಮಟ್ಟದಲ್ಲಿದ್ದರೆ ಬ್ಯಾಂಕ್ ನಿಮ್ಮ ಸಾಲದ ಅರ್ಜಿಯನ್ನು ತಿರಸ್ಕರಿಸಬಹುದು ಅಥವಾ ಹೆಚ್ಚಿನ ಅಡಮಾನ ಕೇಳಬಹುದು. ಸಿಬಿಲ್ ಸ್ಕೋರ್ ನ್ನು ಕ್ರೆಡಿಟ್ ಇನ್ಫಾರ್ಮಶನ್ ಬ್ಯೂರೋ ಇಂಡಿಯಾ ಲಿಮಿಟೆಡ್ (Credit Information Bureau India limited – CIBIL) ನಿರ್ವಹಿಸುತ್ತದೆ.
ಈ ಸಂಸ್ಥೆಯನ್ನು ಹೊರ ತುಪಡಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಎಕ್ಸ್ಪರಿಯನ್, ಇಕ್ವಿ ಫ್ಯಾಕ್ಸ್ ಮತ್ತು CIRF ಕ್ರೆಡಿಟ್ ಸ್ಕೋರ್ ನಿರ್ವಹಣೆಯ ಕಂಪನಿಗಳಾಗಿವೆ. ನೀವು ನಿಮ್ಮ ಮೊಬೈಲ್ ನಲ್ಲಿ ಸಿಬಿಲ್ ಸ್ಕೋರ್ ಚೆಕ್ ಮಾಡಿಕೊಳ್ಳುವುದಕ್ಕೆ ಅನುಕೂಲತೆ ಮಾಡಿಕೊಡಲಾಗಿದೆ.
RBI ಕೆಲವು ಹಣಕಾಸು ಸಂಸ್ಥೆಗಳಿಗೆ ತಮ್ಮ ಗ್ರಾಹಕರಿಗೆ ವಾರ್ಷಿಕವಾಗಿ ಸಿಬಿಲ್ ಸ್ಕೋರ್ ಸ್ಟೇಟಸ್ ತಿಳಿಸಬೇಕು ಎಂದು ಕೂಡ ಸೂಚನೆ ಕೊಟ್ಟಿದೆ. ಸಾಮಾನ್ಯವಾಗಿ 750 ರಿಂದ 900ರ ಅಂಕದೊಳಗೆ ಸಿಬಿಲ್ ಸ್ಕೋರ್ ಇದ್ರೆ ಅದನ್ನು ಅತ್ಯುತ್ತಮ ಸಿಬಿಲ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ, ಹೆಚ್ಚು ಪಾಯಿಂಟ್ ಗಳನ್ನು ನಿರ್ವಹಿಸಿರುವ ವ್ಯಕ್ತಿಗೆ ಸುಲಭವಾಗಿ ಸಾಲ ಸಿಗುತ್ತದೆ.
650 ರಿಂದ 750ರ ನಡುವೆ ಸಿಬಿಲ್ ಸ್ಕೋರ್ ಇದ್ದರೆ ಅದನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. 550 ರಿಂದ 650 ರವರೆಗಿನ ಸಿಬಿಲ್ ಪಾಯಿಂಟ್ ಸರಾಸರಿ ಎಂದು ಗುರುತಿಸಲಾಗುತ್ತದೆ. ಹಾಗೆ 300 ರಿಂದ 500 ರ ಒಳಗಿನ ಸಿಬಿಲ್ ಸ್ಕೋರ್ ಕಳಪೆಯಾಗಿರುತ್ತದೆ. ಇಂತಹ ಸ್ಕೋರ್ ಹೊಂದಿರುವವರಿಗೆ ಬ್ಯಾಂಕ್ ಗಳಲ್ಲಿ ಸಾಲ ಸಿಗುವುದು ಬಹಳ ಕಷ್ಟ.
ಸಿಬಿಲ್ ಸ್ಕೋರ್ ಇಳಿಯುವುದಕ್ಕೆ ಕಾರಣವೇನೆಂದರೆ, ನೀವು ಪಡೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡದಿದ್ದರೆ, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದಿದ್ದರೆ, ಬ್ಯಾಂಕ್ ಖಾತೆಯನ್ನು ಹೊಂದಿದ್ದು ಸಾಕಷ್ಟು ದಿನ ಬ್ಯಾಂಕ್ ನಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಮಾಡದೆ ಇದ್ದರೆ ಸಿಬಿಲ್ ಸ್ಕೋರ್ ಡೌನ್ ಆಗುತ್ತದೆ.
ಸಿಬಿಲ್ ಸ್ಕೋರ್ ಉತ್ತಮವಾಗಿಸಿಕೊಳ್ಳಲು ನೀವು ಬ್ಯಾಂಕ್ ವ್ಯವಹಾರವನ್ನು ಸರಿಯಾಗಿ ಮಾಡಬೇಕು, ಸಾಲ ಪಡೆದುಕೊಂಡಿದ್ದರೆ ಪ್ರತಿ ತಿಂಗಳು EMI ಸರಿಯಾದ ಅವಧಿಗೆ ಪಾವತಿ ಮಾಡಬೇಕು. ಡ್ಯೂ ಡೇಟ್ (loan due date) ಮುಗಿಯೋದ್ರೊಳಗೆ ಕ್ರೆಡಿಟ್ ಕಾರ್ಡ್ ಸಾಲವನ್ನು ತೀರಿಸಬೇಕು. ಈ ರೀತಿ ನಿರ್ವಹಣೆ ಮಾಡಿದರೆ ಕ್ರೆಡಿಟ್ ಸ್ಕೋರ್ ಉತ್ತಮವಾಗುತ್ತದೆ ಹಾಗೂ ಬ್ಯಾಂಕ್ ಗಳಿಂದ ತಕ್ಷಣ ಸಾಲ ಸಿಗುತ್ತದೆ.